Wednesday, February 5, 2025

ದೇವನೊಬ್ಬನೇ ನಾಮ ಹಲವು

 ದೇವನೊಬ್ಬನೇ ನಾಮ ಹಲವು

ಅವನ ನಾಮವೇ ನಮ್ಮ ಬಲವು

ಅವನು ಒಲಿದರೆ ಎಲ್ಲ ಚಲುವು

ಸೋಲಿನಲ್ಲೂ ಇಹುದು ಗೆಲುವು


ಎಲ್ಲಿ ನೋಡಿದರಲ್ಲಿ ಅವನೇ

ಎಂದು ಹೇಳುವರೆಲ್ಲ, ಶಿವನೇ!

ನಿನ್ನ ದರುಶನ ತೋರು ಹರನೇ, 

ಬಾರೋ ತಂದೆ ಬಿರನೆ ಬಿರನೆ! 


ಕಾಣದಾಗಿಹನವನು ಏಕೆ?

ಅವನ ಕಾಣಲು ಭಕುತಿ ಸಾಕೆ? 

ಮನವ ತುಂಬಿದೆ ಒಂದು ಬಯಕೆ,

ಕಾಣಲವನನು ಪುಣ್ಯ ಬೇಕೆ? 


ನೂರು ಜನುಮವ ತಾಳಿ ಬರುವೆ, 

ಎಲ್ಲು ಅಲುಗದೆ ಇಲ್ಲೆ ಇರುವೆ,

ತೋರು ನಿನ್ನನು ಜಗದ ಗುರುವೆ, 

ನಮ್ಮ ಕಾಯುವ ಆದಿ ಮರವೆ!


No comments:

Post a Comment

ಮುಂಜಾನೆಯ ಬೆಳಕು ಕುಕ್ಕುಟವಾಯ್ತು

 ಮುಂಜಾನೆಯ ಬೆಳಕು ಕುಕ್ಕುಟವಾಯ್ತು  ಕಣ್ಣೆರಡನು ಹೊರಲೋಕಕೆ ತೆರೆದಾಯ್ತು!  ಒಳಗಣ ಲೋಕವ ಕಾಣುವ ಕಣ್ಣನು  ತೆರೆಯುವ ಸಮಯವು ಬಂದಾಯ್ತು! ಕಣ್ಣನು ಒರೆಸಿರಿ, ಮಣ್ಣನು ತೊರೆಯಿ...