Wednesday, February 5, 2025

ಮುಂಜಾನೆಯ ಬೆಳಕು ಕುಕ್ಕುಟವಾಯ್ತು

 ಮುಂಜಾನೆಯ ಬೆಳಕು ಕುಕ್ಕುಟವಾಯ್ತು 

ಕಣ್ಣೆರಡನು ಹೊರಲೋಕಕೆ ತೆರೆದಾಯ್ತು! 

ಒಳಗಣ ಲೋಕವ ಕಾಣುವ ಕಣ್ಣನು 

ತೆರೆಯುವ ಸಮಯವು ಬಂದಾಯ್ತು!


ಕಣ್ಣನು ಒರೆಸಿರಿ, ಮಣ್ಣನು ತೊರೆಯಿರಿ, 

ಕಾಣದ ಒಳಸಿರಿ ಹೊನ್ನನು ಬಯಸಿರಿ

ಬಾಳನು ಬಾಳುವ ಸೂಕ್ಷ್ಮವನರಿಸಿರಿ

ಪಡೆಯಿರಿ ಲೋಕವ ಗೆಲ್ಲುವ ಪರಸಿರಿ 🥰🙏🏼 shubhOdaya! 


The morning rays are the rooster,

that has opened the eyes to the outer world! 

Time has come to open the inner eyes to witness the world within! 

Rub your eyes, remove the dust,

seek to peek into the unseen world, 

learning the subtle ways to live life,

earn the divine wealth to win over this world! 

Good morning 😁😁🥰🥰🙏🏼🙏🏼


ನಂಬಿದೆ ನೀನಾರನಾ?

 ನಂಬಿದೆ ನೀನಾರನಾ? 

ನೋವು ಕೊಡುವ ಮಾರನ!

ಜೊತೆಗೆ ಬಂದ, ನಿನ್ನ ಕೊಂದ,

ಮಹಾ ದಗಾಕೋರನ!

ನಂಬಿಕೆಯ ಪಾಶದಲ್ಲಿ,

ಸಂಬಂಧದ ಕೂಪದಲ್ಲಿ,

ನಿನ್ನ ತಳ್ಳಿ, ಕಡೆದು ಬಳ್ಳಿ,

ಭಾವದ ವ್ಯಾಪಾರನಾ!

ಖುಷಿಯ ತೋರಿ, ಹುಸಿಯ ಮಾರಿ, 

ಕೈಯ್ಯಕೊಟ್ಟು ಬೇರೆ ಹಾರಿ,

ದೂರದಿಂದ ಒಲವ ತೋರೊ,

ನಿನ್ನ ಚಿತ್ತ ಛೋರನಾ,

ಇಂತ ಮೋಸಗಾರನಾ! 

ನಂಬಿದೆ ನೀನಾರನಾ? 

ನೋವು ಕೊಡುವ ಮಾರನ!

ಜೊತೆಗೆ ಬಂದ, ನಿನ್ನ ಕೊಂದ,

ಮಹಾ ದಗಾಕೋರನ!


ಕಳೆ ಬೆಳೆಯ ಕ್ಷೀಣಿಪುದು

 ಕಳೆ ಬೆಳೆಯ ಕ್ಷೀಣಿಪುದು, ಕೆಳೆ ಬಾಳ ವೃದ್ದಿಪುದು! ಕಳೆಯ ಕೊಳೆಯ ಕಿತ್ತೆಸೆದು, ಈ ಇಳೆಯ ಸೊಬಗ ಸೂಸೆಂದ ಗಿರಿಚಂದ್ರ!

Weeds ruin the crops. Friendships create prosperity in life. Discard the filth of the weeds, and enjoy the harvest on Mother Earth. 

ಮಸಣವಾಗಿಸಬೇಡ ಮನಸ,

 ಮಸಣವಾಗಿಸಬೇಡ ಮನಸ,

ಕಸವನಾಗಿಸಬೇಡ ಕನಸ!

ಹೊಸತನವ ನೀ ಹೆಡೆದು,

ಹುಸಿತನವ ನೀ ತೊಡೆದು, 

ಸಸಿಯ ನೆಡೆ, ಮುಂದೆ ನಡೆ,

ನಿನ್ನರಿವಿರಲಿ ಎಲ್ಲ ಕಡೆ, 

ತಟ್ಟದೆಯೆ ನಿನ್ನ ತೊಡೆ,

ಬಿಚ್ಚದೆಯೆ ನಿನ್ನ ಹೆಡೆ,

ಶಾಂತಿಯನು ನೀನು ಪಡೆ,

ಅಲ್ಲಿಯೇ ಭಗವಂತನೆಡೆ! 

ಅಲ್ಲಿಯೇ ಭಗವಂತನೆಡೆ!


ದಿನಕರನು ಶುಭಕರನು, ಶುಭವನ್ನೆ ಸಾರುವನು,

 ದಿನಕರನು ಶುಭಕರನು, ಶುಭವನ್ನೆ ಸಾರುವನು,

ಕಿಂಕರನಭಯಕರನು, ಲಂಕವನೇ ಹಾರುವನು!

ರುಕ್ಮಿಣಿಗೆ ಒಲಿದವನು, ಮೇಲಕೆ ಒಯ್ಯುವನು,

ಸೀತೆಯಾ ಗೆದ್ದವನು, ಲೋಕವನು ಕಾಯುವನು!

ವಾಮನಾ ರೂಪದಲಿ ರಾಕ್ಷಸನ ತುಳಿಯುವನು,

ಪ್ರಳಯದಾ ಕಾಲದಲಿ ತಾನೊಬ್ಬ ಉಳಿಯುವನು!

ಶ್ರೀ ಕೃಷ್ಣ ಶ್ರೀ ಕೃಷ್ಣ ಶ್ರೀ ಕೃಷ್ಣ ಕೃಷ್ಣ 

ಶ್ರೀ ಕೃಷ್ಣ ಶ್ರೀ ಕೃಷ್ಣ ಶ್ರೀ ಕೃಷ್ಣ ಕೃಷ್ಣ 

ಶ್ರೀ ಕೃಷ್ಣ ಶ್ರೀ ಕೃಷ್ಣ ಶ್ರೀ ಕೃಷ್ಣ ಕೃಷ್ಣ


ನಿನ್ನ ನಗು ಕೊಡು ನನಗೂ

 ನಿನ್ನ ನಗು ಕೊಡು ನನಗೂ 

ಓ ನನ್ನ ಮುದ್ದು ಮಗು!

ನೀ ನನಗೂ ನಾ ನಿನಗೂ! 

ಉತ್ಸಾಹದಿ ಮುಂದೆ ಒಗು!


ಕಷ್ಟಗಳ ಮಳೆಯು ದಿಟ,

ಬಾಳಿನಲಿ ಒಂದು ಪುಟ!

ಅನುಭವಗಳೆ ನಮ್ಮ ಮಠ,

ಜೀವನದಲಿ ಇರಲಿ ಹಠ!


ಸಾವು ನೋವು ನೂರಾರು,

ಜನ್ಮ ನಮದು ಸಾವಿರಾರು,

ಲೆಕ್ಕವಿಲದ ತಲೆಮಾರು,

ವಿಧಿಯ ಮುಂದೆ ನಾವ್ಯಾರು!


ಕಷ್ಟಗಳು ನೂರಿರಲಿ,

ಸಾಧಿಸುಸ ಛಲವಿರಲಿ,

ಯಾವುದೇ ಫಲವಿರಲಿ,

ನಂಬಿಕೆಯ ಬಲವಿರಲಿ! 

ಬಾಳಿನಲಿ ಒಲವಿರಲಿ,

ಬಾಳಿನಲಿ ಒಲವಿರಲಿ

ಚಂದ್ರನ ಬೆಳಕಿಗೆ ಕರಗುವ ಹೆಣ್ಣು

 ಚಂದ್ರನ ಬೆಳಕಿಗೆ ಕರಗುವ ಹೆಣ್ಣು,

ಸೂರ್ಯನ ಶಾಕವ ಎದರಿಸೊ ಹೆಣ್ಣು

ಭೂಮಿಯ ಮಣ್ಣು, ಸಾರದ ಕಣ್ಣು

ನೀನೇ ಹಣ್ಣು, ನೀನೇ ಗಿಣ್ಣು! 

ನೀನೇ ಹೊನ್ನು, ನೀನೇ ಚೆನ್ನು,

ನಡೆಸಲು ನಮ್ಮನು ನೀನೇ ಬೆನ್ನು! 

ಬಾಳಿನ ನವಿಲಿಗೆ ನೀನೆ ಗರಿಯು

ಚಿತ್ತದ ನಲಿವಿಗೆ ನೀನೇ ಗುರಿಯು!

ನೀನೇ ನೀರು, ನೀನೇ ಗಿರಿಯು

ಪ್ರಕೃತಿಯು ನೀನೆ, ಸುಕೃತಿಯು ನೀನೆ

ಸಂಸ್ಕಾರದ ದೀಪವು, ಬೆಳಕೂ ನೀನೆ! 

ನೀನನಗೆಲ್ಲವು, ನೀನನದೆಲ್ಲವು!

ನೀನೆ ನಾನು! ನಾನೇ ನೀನು!


ಸಾಮಾನ್ಯ ರೂಪದಲಿ ಅಸಾಮಾನ್ಯ ನಾನು,

 ಸಾಮಾನ್ಯ ರೂಪದಲಿ ಅಸಾಮಾನ್ಯ ನಾನು,

ಕಾಲವನು ಸಾಲವಾಗೆಣಿಸೊ ಅಮಾನ್ಯ ನಾನು!

ಪ್ರೀತಿಯಲಿ ಜನಿಸಿರುವೆ ಪ್ರೀತಿಯನೆ ಬೆಸೆಯುವೆನು,

ಪರಹಿತವ ಬಯಸುತೆನ್ನ ಭೀತಿಗಳನೆಸೆಯುವೆನು! 

ಕಷ್ಟಗಳ ಸಾಗರದಿ ಮೀನಂತೆ ನಾನು,

ನೀನ್ಹೇಗೋ ನಾನ್ಹಾಗೆ ನಿನ್ನಂತೆ ನಾನು!

ಮರ್ತ್ಯದ ದೇಹವಿದು, ಸಾಯುವೆನು ನಾನು!

ಸಾಧನೆಯ ಪಥದಲ್ಲಿ ಸಾಗುವೆನು ನಾನು!


ತಂದೆ ಶ್ರೀ ಕೃಷ್ಣನಾ ಹೃದಯದಲಿ ನಾನು,

 ತಂದೆ ಶ್ರೀ ಕೃಷ್ಣನಾ ಹೃದಯದಲಿ ನಾನು,

ನನ್ನ ಈ ಹೃದಯದಲಿ ಶ್ರೀ ಕೃಷ್ಣ ಭಾನು!

ಬೆಳಕನ್ನು ನೀಡುವನು, ಕಷ್ಟಗಳ ನೀಗುವನು,

ತಂದೆ ನೀನೆಂದೊಡೆ, ಕರುಣೆಯಲಿ ಕರಗುವನು!


ಕಾರಣಕೆ ಕಾರಣನು ಲೋಕಕೇ ರಕ್ಷಕನು,

ರುಕ್ಮಿಣೀ ವಲ್ಲಭನು, ಕಾಲದಾ ಭಕ್ಷಕನು! 

ಭಾಸ್ಕರನು, ಅರ್ಯಮನು, ದಿವಕರನು ಶಿವನು,

ಸ್ಥಿತಿ-ಸೃಷ್ಟಿ-ಲಯ ಕರ್ತ ಎಲ್ಲವೂ ಇವನು! 


ಇವ ಮಿತ್ರ, ಇವ ಸತ್ರ, ಸರ್ವತ್ರನಿವನು,

ಇವ ಅಸ್ತ್ರ, ಇವ ಶಸ್ತ್ರ, ಇಡಿ ಶಾಸ್ತ್ರನಿವನು! 

ಇವ ಒಂದೆ, ಇವ ತಂದೆ, ಲೋಕಕೇ ಹಿತನು,

ಇವ ಬಿಂದು, ಇವ ಬಂಧು, ಮತನೂ ಇವ ಅಮಿತನು! 


ಪಾಂಡವರ ದ್ರೌಪದಿಯ ಕಷ್ಟದಲಿ ಕಾದವನು

ಕುಂತಿಗೆ ಒಲಿದವನು, ಶ್ರೀಧರನು ಮಾಧವನು!

ಕೆಡುಕರಿಗೆ ಕೆಟ್ಟವನು, ಗೀತೆಯನು ಕೋಟ್ಟವನು, 

ಬ್ರಹ್ಮಾದಿತಿ ಸುತರ ದರ್ಪವನು ಸುಟ್ಟವನು!


ಸಾಕ್ಷಿಯಾ ರೂಪದಲಿ ಎಲ್ಲವನು ಬಲ್ಲವನು,

ನಡೆದವಗೆ ನಡೆಯುವನು, ನಿಂತವಗೆ ನಿಲ್ಲುವನು!

ಬಿಲ್ಲನೂ ಹಿಡಿಯುವನು, ರಾಕ್ಷಸರ ಕೊಲ್ಲುವನು, 

ಎಲ್ಲವನು ಸೆಳೆಯುವನು, ಬೆಳಕಲ್ಲೂ ಹೊಳೆಯುವನು! 


ಶ್ರೀ ಕೃಷ್ಣನಿವನು ಶ್ರೀ ಕೃಷ್ಣನಿವನು 

ಶ್ರೀ ಕೃಷ್ಣನಿವನು ಶ್ರೀ ಕೃಷ್ಣನಿವನು!


ಕನ್ನಡವು ಬರಿ ಭಾಷೆಯಲ್ಲ

 ಕನ್ನಡವು ಬರಿ ಭಾಷೆಯಲ್ಲ 

ಕನ್ನಡ ನಮ್ಮಯ ಅಭಿಮಾನ

ಕನ್ನಡ ಮೊದಲು ಕನ್ನಡ ಕೊನೆಯು

ಕನ್ನಡ ಹೆಮ್ಮೆಯ ಸಂದಾನ

ಕನ್ನಡದಲ್ಲೇ ಭಾವನೆ ವ್ಯಕ್ತ

ಕನ್ನಡದಲ್ಲೀ ನಾವಾಸಕ್ತ

ಕನ್ನಡ ಒಂದಿರೆ ನಮಗಾನಂದ

ಕನ್ನಡ ಮುತ್ತನು ನುಡಿ ನೀ ಕಂದ!

ಕನ್ನಡ ಮಿಡಿತವು ಕಣಕಣದಲ್ಲೂ

ಕನ್ನಡ ಕನ್ನಡಿ ಕ್ಷಣಕ್ಷಣದಲ್ಲೂ

ಕನ್ನಡಕಿಲ್ಲ ಯಾವುದು ಸಾಟಿ

ಕನ್ನಡ ಮುಗ್ಧವು ಕನ್ನಡ ಘಾಟಿ

ಕನ್ನಡ ಬಂದವ ಎಲ್ಲವ ಬಲ್ಲ

ಕನ್ನಡ ಸವಿರುಚಿ ಕನ್ನಡ ಬೆಲ್ಲ


ಬೀಜವಾದ ಜೀವ, ವೃಕ್ಷವಾದುದೆಂದು?

 ಬೀಜವಾದ ಜೀವ, ವೃಕ್ಷವಾದುದೆಂದು?

ದೇಹದಲ್ಲಿ ಚಿತ್ತ, ಬೆತ್ತಲಾದುದೆಂದು?

ಅದೆಂದು ಆಯಿತಿಂತ, ಮಾಯೆ ಕಾಣೆ ದೇವ,

ಜೀವ ತನ್ನೇ ಮರೆತು, ಅಪ್ಪಿದಂತೆ ನೋವ,

ಸಾಯುವಂತ ದೇಹ, ಕಾಡುವಂತ ದಾಹ,

ತನ್ನೇ ಮೀರಿ ಬೆಳೆದ, ಕಗ್ಗಾಡಿನಂತ ಮೋಹ,

ಮೋಹದಿಂದ ಜೀವ, ಬದ್ಧವಾಯಿತಾಗ,

ಅಳುತ ಮುಗ್ಧ ಜೀವ, ಅದೇ ಹಳೆಯ ರಾಗ,

ಇಷ್ಟಕ್ಕೆಲ್ಲ ಮುಕ್ತಿ, ಸಿಗಲು ಸಾಧ್ಯವೆಂದು?

ಇರುವ ಪುಟ್ಟ ಸಂಧು, ನುಸಿಯಲಾಗುವಂದು,

ದೇಹ ಬಂಧ ಬಿಟ್ಟು, ಈ ಜೀವ ಹಾರಿದಂದು!!!

ದೇಹ ಬಂಧ ಬಿಟ್ಟು, ಈ ಜೀವ ಹಾರಿದಂದು!!!

— gaviratna giridasa 😜


ಲೋಕಕೆ ಬಂದನು ದೇವಕಿಕಂದನು

 ಕೃಷ್ಣ

ಲೋಕಕೆ ಬಂದನು ದೇವಕಿಕಂದನು

ಎಲ್ಲರ ಹೃದಯದಿ ನೆಲೆಸಿದನು

ದೈತ್ಯರ ಕೊಲ್ಲುತ, ಎಲ್ಲರ ಮೆಲ್ಲುತ

ಭಕುತಿಯ ಬೀಜವ ಹರಡಿದನು!


ಒಳಗೂ ಹೊರಗೂ ಎಲ್ಲವ ಅರಿತವ 

ನಂದನ ನಂದನು ಶ್ರೀಧರನು

ಗೋಪೀಜನ ಮನಗ್ ಒಲಿದವನು

ಪಾಂಡವ ಪ್ರಿಯನಿವ ಮಾಧವನು!! 


ಅಣುವಲಿ ಅಣು ಇವ ಪರನಿವ ಶಿವನಿವ

ಅಚ್ಯುತನಿವ ಇವ ಅವ್ಯಯನು

ಕರುಣಾಸಾಗರ ಸಾಕ್ಷಿಸ್ವರೂಪ

ವಲ್ಲಭನಿವ ಸರ್ವೋತ್ತಮನು 


ದ್ರೌಪದಿ ರಕ್ಷಕ ಕಾಲ ವಿಭಕ್ಷಕ

ಧರ್ಮ ಸುರಕ್ಷಕ ದ್ವಾರಕನು

ರಾಮನು ಇವ ಇವ ಭೀಮನು ಇವ ಇವ 

ತುಲಸೀ ಪ್ರಿಯ ಗೋವರ್ಧನನು

ಚೋರನು ಇವ ಇವ ಜಾರನು ಇವ ಇವ

ಘೋರನು ಮಾರನು ಪ್ರಿಯಕರನು

ವೇದ್ಯನು ವೈದ್ಯನು ಔಷದನಿವನಿವ 

ಮುಕ್ತಿಯು ಲೋಕದನಾಯಕನು!

ಕೃಷ್ಣನು ಭದ್ರ-ಸುಭದ್ರನ ಅನುಜನು 

ಭಕುತನ ಹೃದಯದಿ ಕರಗುವನು!

ಕೇಶವ ಮಾಧವ ವಿಕ್ರಮನಿವ 

ಇವ ವಾಮನನು, ಹರಿಕೇಸರನು!


ಸೂರ್ಯನ ಬೆಳಕಿದು, ಮಂಗಳವಾಗಿದೆ

 ಸೂರ್ಯನ ಬೆಳಕಿದು, ಮಂಗಳವಾಗಿದೆ,

ಏಳಲು ಪ್ರೇರಣೆ ಮಾಡುತಿದೆ!

ಕಿರಣದ ಮೂಲಕ ಆತ್ಮವ ತಟ್ಟುತ

ಎಲ್ಲೆಡೆ ಸಂತಸ ಹರಡುತಿದೆ!


ಒಳಗಿನ ಹೊರಗಿನ ದರ್ಶನವೀಯುತ

ಜ್ಞಾನದ ತುತ್ತನು ನೀಡುತಿದೆ! 

ಜೀವಕೆ ಜೀವವ ತುಂಬುತ, ತಾನು

ಏನನು ಹೇಳದೆ ಹೊಳೆಯುತಿದೆ!


ಕರುಣೆಯ ತೋರಲು ಕಷ್ಟವ ಕೊಟ್ಟು

 ಕರುಣೆಯ ತೋರಲು ಕಷ್ಟವ ಕೊಟ್ಟು,

ಕರ್ಮದ ಮೂಟೆಯ ಇಳಿಸುವನು!

ಕೈಯನು ಹಿಡಿದು ನಡೆಸುವ ಆತನು

ಕೈಯ್ಯನು ಬಿಟ್ಟೂ ನೋಡುವನು! 

ಕಲಿಸಲು ಪಾಠವ ಜಿಗಿಟುತ ನಮ್ಮನು,

ಅಳುವಾ ಮಗುವೊಲು ಆರೈಸುವನು!

“ಬೀಳಲಿ ಬೀಳಲಿ, ಪಾಠವ ಕಲಿಯಲಿ”

ಎನ್ನುತ ನಗುತಲಿ ನೋಡುವನು!

ಅಳುತಲಿ ನೆನೆದರೆ ಅವನನು ಸಾಕು,

ಕರುಗುವ ಬೆಣ್ಣೆಯವನಾಗುವನು! 

ಇಂತಹಾ ತಂದೆಯ ಕಂಡಿರ ನೀವು?

ನಂಬದಿದ್ದರೂ ಕಾಪಾಡುವನು!


ದೇವನೊಬ್ಬನೇ ನಾಮ ಹಲವು

 ದೇವನೊಬ್ಬನೇ ನಾಮ ಹಲವು

ಅವನ ನಾಮವೇ ನಮ್ಮ ಬಲವು

ಅವನು ಒಲಿದರೆ ಎಲ್ಲ ಚಲುವು

ಸೋಲಿನಲ್ಲೂ ಇಹುದು ಗೆಲುವು


ಎಲ್ಲಿ ನೋಡಿದರಲ್ಲಿ ಅವನೇ

ಎಂದು ಹೇಳುವರೆಲ್ಲ, ಶಿವನೇ!

ನಿನ್ನ ದರುಶನ ತೋರು ಹರನೇ, 

ಬಾರೋ ತಂದೆ ಬಿರನೆ ಬಿರನೆ! 


ಕಾಣದಾಗಿಹನವನು ಏಕೆ?

ಅವನ ಕಾಣಲು ಭಕುತಿ ಸಾಕೆ? 

ಮನವ ತುಂಬಿದೆ ಒಂದು ಬಯಕೆ,

ಕಾಣಲವನನು ಪುಣ್ಯ ಬೇಕೆ? 


ನೂರು ಜನುಮವ ತಾಳಿ ಬರುವೆ, 

ಎಲ್ಲು ಅಲುಗದೆ ಇಲ್ಲೆ ಇರುವೆ,

ತೋರು ನಿನ್ನನು ಜಗದ ಗುರುವೆ, 

ನಮ್ಮ ಕಾಯುವ ಆದಿ ಮರವೆ!


ಭಗವತ ಗೀತೆಯು

 ಭಗವತ ಗೀತೆಯು ಭಾವದ ಗೀತಿಯು

ಭೂತದ ಭವ್ಯದ ಕನ್ನಡಿಯು!

ಮುಂದಿನ ಹಿಂದಿನ, ಅಂದಿನ ಇಂದಿನ

ಎಂದಿನ ಜ್ಞಾನದ ಚೆನ್ನುಡಿಯು….


ಜೀವದ ಜಗತಿನ ಈಶ್ವರ ಒಗಟಿನ

ತತ್ವವ ತೋರುವ ಪಾಠವಿದು

ಅವತಾರ ಪುರುಷನು ಅವತರಿಸುವ ಬಗೆ

ಚಿಂತನೆಗೊದಗುವ ಯೋಗವಿದು!


ರಾಕ್ಷಸ-ದೈವದ ಗುಣಗಳ ಗುಹ್ಯವ

ಬಿಚ್ಚಿಟ್ಟು ತೋರುವ ಶಾಸ್ತ್ರವಿದು

ಅರ್ಜುನ ಕೇಳಿದ ಪ್ರಶ್ನೆಗೆ ಉತ್ತರ

ಮೋಕ್ಷಕೆ ಒಯ್ಯುವ ಸೂತ್ರವಿದು! 


ಸೂಕ್ಷ್ಮಾತಿಸೂಕ್ಷ್ಮದ ವಿಷಯವ ಬಿಡಿಸುವ 

ಮರ್ಮದ ಧರ್ಮದ ಶಸ್ತ್ರವಿದು

ಋಷಿಗಳ ಮಂತನೆ, ವೇದದ ಚಿಂತನೆ, 

ಪ್ರಮಾಣಗಳೆಲ್ಲಕೆ ರಾಜವಿದು!


ಮುಂಜಾನೆಯ ಬೆಳಕು ಕುಕ್ಕುಟವಾಯ್ತು

 ಮುಂಜಾನೆಯ ಬೆಳಕು ಕುಕ್ಕುಟವಾಯ್ತು  ಕಣ್ಣೆರಡನು ಹೊರಲೋಕಕೆ ತೆರೆದಾಯ್ತು!  ಒಳಗಣ ಲೋಕವ ಕಾಣುವ ಕಣ್ಣನು  ತೆರೆಯುವ ಸಮಯವು ಬಂದಾಯ್ತು! ಕಣ್ಣನು ಒರೆಸಿರಿ, ಮಣ್ಣನು ತೊರೆಯಿ...